ಧರ್ಮರಾಯ -
 	ಪಂಚ ಪಾಂಡವರಲ್ಲಿ ಹಿರಿಯ.  ಪಾಂಡುರಾಜನ ಹಿರಿಯ ಹೆಂಡತಿ ಕುಂತಿಯಲ್ಲಿ ಯಮನ ಅನುಗ್ರಹದಿಂದ ಜನಿಸಿದ.  ಭೀಮ, ಅರ್ಜುನ, ನಕುಲ ಮತ್ತು ಸಹದೇವ ಇವರು ತಮ್ಮಂದಿರು.  ಅಜಾತ ಶತ್ರು, ಯುಧಿಷ್ಠಿರ, ಧರ್ಮಪುತ್ರ ಎಂಬ ಹೆಸರುಗಳೂ ಈತನಿಗಿವೆ.  ಕೌರವರು ಮತ್ತು ಇತರ ಪಾಂಡವರೊಡನೆ ದ್ರೋಣನಲ್ಲಿ ಧನುರ್ವಿದ್ಯೆಯನ್ನು ಕಲಿತ.  ಧೃತರಾಷ್ಟ್ರನಿಂದ ಯುವರಾಜಪದವಿಯನ್ನು ಪಡೆದ.  ವಿದುರನ ಮೂಲಕ ಗುಟ್ಟನ್ನು ತಿಳಿದು ವಾರಣಾವತದ ಅರಗಿನ ಮನೆಯಿಂದ ತಾಯಿ ತಮ್ಮಂದಿರೊಡನೆ  ಪಾರಾಗಿ ಏಕಚಕ್ರನಗರ ಸೇರಿದ.  ಕುಂತಿ ಬಕನಲ್ಲಿಗೆ ಭೀಮನನ್ನು ಕಳಿಸಿದಾಗ ಪರಿತಪಿಸಿದ.  ದ್ರೌಪದಿಯ ಸ್ವಯಂವರ ವಾರ್ತೆಯನ್ನು ಕೇಳಿ ವೇಷಾಂತರದಿಂದ ತಾಯಿ ತಮ್ಮಂದಿರೊಡನೆ ದ್ರುಪದ ನಗರವನ್ನು ಸೇರಿ ಕುಂಬಾರನ ಮನೆಯಲ್ಲಿ ಇಳಿದ.  ಬ್ರಾಹ್ಮಣ ವೇಷದಿಂದ ಸ್ವಯಂವರ ಮಂಟಪವನ್ನು ಪ್ರವೇಶಿಸಿ ಸ್ವಯಂವರಾನಂತರ ನಡೆದ ಯುದ್ಧದಲ್ಲಿ ದುರ್ಯೋಧನನನ್ನು ಸೋಲಿಸಿದ.  ಹಸ್ತಿನಾವತಿಯನ್ನು ಸೇರಿ ಅರ್ಧರಾಜ್ಯವನ್ನು ಪಡೆದು ಪಟ್ಟಾಭಿಷಿಕ್ತನಾದ.  ನಾರದನ ಮೂಲಕ ಸುಂದೋಪಸುಂದರ ಚರಿತ್ರೆಯನ್ನು ಕೇಳಿ ತಾನು ಮತ್ತು ತನ್ನ ಇತರ ನಾಲ್ವರು ತಮ್ಮಂದಿರು ದ್ರೌಪದಿಯೊಡನೆ ಒಬ್ಬೊಬ್ಬರ ಸರದಿಯ ಪ್ರಕಾರ ಏಕಾಂತದಲ್ಲಿರುವಂತೆ ನಿರ್ಣಯಿಸಿದ.  ದ್ರೌಪದಿಯಲ್ಲಿ ಪ್ರತಿವಿಂದ್ಯನೆಂಬ ಮಗನನ್ನೂ ಶಿಬಿರಾಜನ ಮಗಳಾದ ದೇವಕಿಯಿಂದ ಯೌಧೇಯನೆಂಬ ಮಗನನ್ನೂ ಪಡೆದ.  ಇಂದ್ರಪ್ರಸ್ಥದಲ್ಲಿ ಮಯ ನಿರ್ಮಿಸಿದ ಸಭಾಭವನ ಪ್ರವೇಶಿಸಿ ಶ್ರೀ ಕೃಷ್ಣ ಕೃಪೆಯಿಂದ ರಾಜಸೂಯಯಾಗ ಮಾಡಿದ.  ಅನಂತರ ಹಸ್ತಿನಾವತಿಗೆ ಸಂಸಾರ ಸಮೇತವಾಗಿ ಬಂದು ಶಕುನಿ ಒಡ್ಡಿದ ದ್ಯೂತ ಪ್ರಲೋಭನೆಗೆ ಒಳಗಾಗಿ ಸರ್ವಸ್ವವನ್ನೂ ಸೋತು ತಮ್ಮ್ಮಂದಿರು ಮತ್ತು ದ್ರೌಪದಿಯೊಡನೆ ವನವಾಸ ಅನುಭವಿಸಿದ.  ಸೂರ್ಯನನ್ನು ಹೊಗಳಿ ಅಕ್ಷಯಪಾತ್ರೆ ಸಂಪಾದಿಸಿದ.  ವ್ಯಾಸ ಮಹರ್ಷಿಯ ಮೂಲಕ ಪ್ರತಿಸ್ಮøತಿ ಎಂಬ ವಿದ್ಯೆಯನ್ನು ಬೃಹದಶ್ವ ಮಹರ್ಷಿಯ ಮೂಲಕ ಅಕ್ಷವಿದ್ಯಾರಹಸ್ಯವನ್ನೂ ತಿಳಿದ.  ಅಜಗರ ರೂಪದಿಂದಿದ್ದ ನಹುಷನ ಪ್ರಶ್ನೆಗಳಿಗೆ ಉತ್ತರಕೊಟ್ಟ.  ಯಕ್ಷರೂಪದಿಂದ ಬಂದು ಕೇಳಿದ ಯಮನ ಪ್ರಶ್ನೆಗಳಿಗೆ ಉತ್ತರ ನೀಡಿ ಯಮನಿಂದ ವರಗಳನ್ನು ಪಡೆದ.  ಕಂಕನೆಂಬ ಹೆಸರಿನಿಂದ ಅಜ್ಞಾತವಾಸಮಾಡಲು ವಿರಾಟ ನಗರವನ್ನು ಸೇರಿದ.  ದಕ್ಷಿಣ ಗೋಗ್ರಹಣ ಸಂದರ್ಭದಲ್ಲಿ ವಿರಾಟನ ಬೆಂಬಲಕ್ಕಾಗಿ ವಲಲಾದಿಗಳೊಡನೆ ಯುದ್ಧಕ್ಕೆ ಹೊರಟ.  ಸುಶರ್ಮ ವಿರಾಟನನ್ನು ಸೆರೆಹಿಡಿದಾಗ ಭೀಮನ ಮೂಲಕ ವಿರಾಟನನ್ನು ಬಿಡಿಸಿದ.  ಕೌರವನನ್ನು ಗೆದ್ದವನು ಉತ್ತರನಲ್ಲ, ಬೃಹನ್ನಳೆ ಎಂದು ಹೇಳಿ ವಿರಾಟನ ಕೋಪಕ್ಕೆ ತುತ್ತಾಗಿ ದಾಳದಿಂದ ಏಟು ತಿಂದ.

	ಸಂಧಿಗಾಗಿ ಹಸ್ತಿನಾವತಿಗೆ ಪ್ರಯಾಣಮಾಡಬೇಕೆಂದು ಕೃಷ್ಣನನ್ನು ಕೇಳಿಕೊಂಡ. ಸೈನ್ಯ ಸಮೇತವಾಗಿ ಕುರುಕ್ಷೇತ್ರ ಯುದ್ಧಕ್ಕೆ ಹೊರಟ. ಪಾದಚಾರಿಯಾಗಿ ಕುರುಸೇನೆಯನ್ನು ಪ್ರವೇಶಿಸಿ ಭೀಷ್ಮದ್ರೋಣಾದಿಗಳನ್ನು ಅಭಿವಂದಿಸಿ ಅವರಿಂದ ಜಯಶೀಲನಾಗುವಂತೆ ಆಶೀರ್ವಾದ ಪಡೆದ.  ಯುದ್ಧದಲ್ಲಿ ದ್ರೋಣ ತನ್ನನ್ನು ಬಂಧಿಸಲು ಬಂದಾಗ ಅರ್ಜುನನ ಸಹಾಯದಿಂದ ಪಾರಾದ.  ಪದ್ಮವ್ಯೂಹವನ್ನು ಭೇದಿಸಲು ಅಭಿಮನ್ಯುವನ್ನು ಪ್ರೇರೇಪಿಸಿದ.  ಅಭಿಮನ್ಯು ಮತ್ತು ಘಟೋತ್ಕಚರು ಹತರಾದಾಗ ಬಹುವಾಗಿ ದುಃಖಿಸಿದ.  ಯುದ್ದದಲ್ಲಿ ಕರ್ಣನ ಬಾಣದಿಂದ ಪೆಟ್ಟುತಿಂದ.  ಅರ್ಜುನನನ್ನು ಹೀಯಾಳಿಸಿ ಕರ್ಣನನ್ನು ಕೊಲ್ಲಲು ಪ್ರೇರೇಪಿಸಿದ.  ಶಲ್ಯ ಮತ್ತು ಅವನ ತಮ್ಮಂದಿರನ್ನು ಕೊಂದ.  ದುರ್ಯೋಧನನ ವಧೆಯ ಅನಂತರ ಗಾಂಧಾರಿಯನ್ನು ಸಂತೈಸಲು ಕೃಷ್ಣನನ್ನು ಹಸ್ತಿನಾವತಿಗೆ ಕಳಿಸಿದ.  ಅಶ್ವತ್ಥಾಮನ ತಲೆಯ ಮೇಲಿದ್ದ ಜೀವರತ್ನವನ್ನು ಭೀಮ ಕಿತ್ತು ತಂದು ದ್ರೌಪದಿಗೆ ಕೊಡಲಾಗಿ ಅವಳ ಕೋರಿಕೆಯಂತೆ ಆ ರತ್ನವನ್ನು ತಲೆಯ ಮೇಲೆ ಧರಿಸಿದ.  ಕರ್ಣನ ಜನ್ಮವೃತ್ತಾಂತವನ್ನು ತಿಳಿದು ರಾಜ್ಯತ್ಯಾಗಮಾಡಲು ನಿಶ್ಚಯಿಸಿದಾಗ ಕ್ಷತ್ರಿಯಧರ್ಮವನ್ನು ಪಾಲಿಸುವಂತೆ ಒತ್ತಾಯಿಸಿದ ವ್ಯಾಸನ ಹಿತವಚನಕ್ಕೆ ಮಣಿದ.  ಹಸ್ತಿನಾವತಿಯನ್ನು ಸೇರಿ ಪಟ್ಟಾಭಿಷೇಕಗೊಂಡ.  ಬಂಧು ಹತ್ಯಾದೋಷ ಪರಿಹಾರಕ್ಕಾಗಿ ಅಶ್ವಮೇಧವನ್ನು ಮಾಡಿದ.  ಶ್ರೀಕೃಷ್ಣನ ನಿರ್ಯಾಣ ವಾರ್ತೆಯನ್ನು ಕೇಳಿ ಧೃತರಾಷ್ಟ್ರನ ದಾಸೀಪುತ್ರ ಯುಯುತ್ಸುವಿಗೆ ರಾಜ್ಯಭಾರ ವಹಿಸಿ, ಪರೀಕ್ಷಿತನಿಗೆ ಪಟ್ಟಗಟ್ಟಿ ಮಹಾ ಪ್ರಸ್ಥಾನಕ್ಕೆ ಹೊರಟ.  ಇಂದ್ರ ರಥವನ್ನು ತಂದು ಅದನ್ನು ಏರ ಹೇಳಲು ತನ್ನನ್ನು ಹಿಂಬಾಲಿಸುವ ನಾಯಿಯನ್ನು ರಥದಲ್ಲಿ ಕುಳ್ಳಿರಿಸಲು ಹೇಳಿದ.  ಭೀಮಾದಿಗಳಿಲ್ಲದ ಸ್ವರ್ಗ ತನಗೆ ಬೇಡವೆಂದ.  ಆಕಾಶ ಗಂಗೆಯಲ್ಲಿ ಮಿಂದು ದಿವ್ಯದೇಹವನ್ನೇ ಧರಿಸಿ ಸೋದರರಿರುವ ಸ್ಥಳವನ್ನು ಸೇರಿದ.

	ಈತ ಮೂರು ಅಶ್ವಮೇಧಯಾಗಗಳನ್ನು ಮಾಡಿದನೆಂದು ಭಾಗವತದಿಂದ ತಿಳಿದುಬರುತ್ತದೆ.
(ಬಿ.ವಿ.ವಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ